ಫಾಕ್ನರ್, ವಿಲಿಯಮ್ ಹ್ಯಾರಿಸನ್
1897-1962. ಪ್ರಸಿದ್ಧ ಕಾದಂಬರಿಕಾರ. ಹುಟ್ಟಿದ್ದು ನ್ಯೂ ಆಲ್ಬೆನಿಯಲ್ಲಿ. ವಿದ್ಯಾಭ್ಯಾಸ ಮಿಸಿಸಿಪಿ ವಿಶ್ವವಿದ್ಯಾಲಯದಲ್ಲಿ, ಅಲ್ಲೆ ಈತನ ತಂದೆ ದ್ರವ್ಯಾಧಿಕಾರಿಯಾಗಿದ್ದ. ಮೊದಲ ಮಹಾಯುದ್ಧ ಕಾಲದಲ್ಲಿ ಕೆನಡ ಪಡೆಯನ್ನು ಸೇರಿ ಫ್ರಾನ್ಸಿನಲ್ಲಿ ಗಾಯಗೊಂಡ. ಸ್ವಲ್ಪಕಾಲ ರಂಗಾರೆ ಕೆಲಸಮಾಡುತ್ತಿದ್ದು ನ್ಯೂ ಆರ್ಲಿಯನ್ಸಿಗೆ ಬಂದ. ಅಲ್ಲಿ ಪ್ರಸಿದ್ಧ ಕಾದಂಬರಿಗಾರ ಷರ್‍ವುಡ್ ಆ್ಯಂಡರ್ಸನ್ನನ ಗೆಳೆತನ ಪ್ರಾಪ್ತವಾಯಿತು. ಸೋಲ್ಜರ್ಸ್ ಪೇ (1926), ಮಸ್ಕಿಟೋಸ್ (1927) ಕೃತಿಗಳನ್ನು ಬರೆದ. ಇವನ ದಿ ಸೌಂಡ್ ಅಂಡ್ ದಿ ಪ್ಯೂರಿ(1929) ತುಂಬ ಸಂಕೀರ್ಣ ಕಾದಂಬರಿ. ಪ್ರಜ್ಞಾಪ್ರವಾಹ ತಂತ್ರವನ್ನು ಬಳಸಿ ಈತ ಬರೆದ ಕಾದಂಬರಿಗಳಲ್ಲಿ ಇದು ಮೊದಲನೆಯದು. ಹಾಲಿವುಡ್ಡಿನವರು ಈ ಕಾದಂಬರಿಯನ್ನು ಬಲು ಚೆನ್ನಾಗಿ ಚಿತ್ರೀಕರಿಸಿದ್ದಾರೆ. ಈ ಕಥೆಯನ್ನು ನಡೆವ ಘಟನೆಗಳಿಗಿಂತ ಪಾತ್ರಗಳ ಆಲೋಚನೆಗಳು ಪ್ರತಿಕ್ರಿಯೆಗಳು ಪ್ರಾಮುಖ್ಯ ಪಡೆದಿವೆ. ಈ ಕಥೆ ಮತ್ತು ಆ್ಯಸ್ ಐ ಲೇ ಡೈಯಿಂಗ್ (1930)-ಇವುಗಳಿಂದ ಫಾಕ್ನರ್ ಜಗತ್ ಪ್ರಸಿದ್ಧನಾದ. ನಿಜವಾಗಿ ಇವನಿಗೆ ಮೊದಲು ಜನಪ್ರಿಯತೆ ಗಳಿಸಿಕೊಟ್ಟ ಪುಸ್ತಕವೆಂದರೆ ಭಯಾನಕ ಕಾದಂಬರಿ ಸ್ಯಾಂಕ್ಚುರಿ (1931). ಉತ್ತರ ಅಮೆರಿಕದ ದಕ್ಷಿಣ ಭಾಗದಲ್ಲಿ ತಲೆದೋರಿದ ಅವನತಿಯನ್ನು ಚಿತ್ರಿಸುವ ಈತನ ಮೊದಲ ಕಾದಂಬರಿ ಸಾರ್ಟೋರಿಸ್ (1929). 1939ರಲ್ಲಿ ಫಾಕ್ನರ್‍ಗೆ ಒ ಹೆನ್ರಿ ಸ್ಮಾರಕ ಬಹುಮಾನ ಬಂತು. 1950ರಲ್ಲಿ ಸಾಹಿತ್ಯಸೃಷ್ಟಿಗಾಗಿ ನೊಬೆಲ್ ಪ್ರಶಸ್ತಿ ಬಂತು.

	ಲೈಟ್ ಇನ್ ಆಗಸ್ಟ್ (1932), ಆ್ಯಬ್‍ಸಲಾಂ ಆ್ಯಬ್‍ಸಲಾಂ (1936), ದಿ ವೈಲ್ಡ್ ಪಾಮ್ಸ್ (1939), ದಿ ಹ್ಯಾಮ್ಲೆಟ್ (1940), ಇನ್‍ಟ್ರೂಡರ್ ಇನ್ ದಿ ಡಸ್ಟ್ (1948). ರಿಕ್ವಿಯಂ ಫಾರ್ ಎ ನನ್, (1952) - ಇವು ಈಚಿನ ಕೆಲವು ಕಾದಂಬರಿಗಳು.

	ಇಡಿಲ್ ಇನ್ ದಿ ಡೆಸರ್ಟ್ (1931), ಡಾ ಮಾರ್ಟಿನೊ (1934), ಗೋ ಡೌನ್, ಮೋಸೆಸ್ (1942)-ಇವು ಕಥಾಸಂಕಲನಗಳು.

	ಈತನ ಮೇಲೆ ಎಡ್ಗರ್ ಅಲೆನ್ ಪೋನ ಪ್ರಭಾವ ಪ್ರಖರವಾಗಿದೆ ಎನ್ನಲಾಗಿದೆ.		      (ಎನ್.ಎಸ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ